ನನ್ನ ಮಾತೃಭಾಷೆ ಕನ್ನಡ
ಪ್ರತಿಯೊಂದು ಮಗುವು ಹುಟ್ಟುವ ಮೊದಲು ತನ್ನ ತಾಯಿಯ ಗರ್ಭದಿಂದ ಪಡೆಯುವ ಬಳುವಲ್ಲಿ ತನ್ನ ಮಾತೃಭಾಷೆ .
ಹಾಗೇ ನನಗೆ ನನ್ನ ತಾಯಿಯಿಂದ ಬಂದಿರುವ ಬಳುವಳಿ ಕನ್ನಡ ಭಾಷೆ.
ಕನ್ನಡ ನಾಡಿನ ನುಡಿ ಸುಂದರ ಸುಮಧುರ.
ವಿಶ್ವಲಿಪಿಗಳ ರಾಣಿಯನ್ನು ಕಣ್ಣು ಬಿಡುತ್ತಲೇ ಕಂಡ ನಾನೇ ಭಾಗ್ಯವಂತ.
ಮಾತನಾಡಲು ನನಗೆ ಐದು ಭಾಷೆ ಬರುತ್ತದೆ, ಬರೆಯಲು ಮತ್ತು ಓದಲು ಮೂರು ಭಾಷೆ.
ಆದರೇ ಮಾತೃಭಾಷೆ ಒಂದೇ, ಅದು ಕನ್ನಡ ಮಾತ್ರ.
ಕರ್ನಾಟಕ ರಾಜ್ಯದ ಆಡಳಿತ ಭಾಷೆ ಕನ್ನಡ .
ಕನ್ನಡ ಭಾಷೆ ನನಗೆ ಧೈರ್ಯ, ಶಕ್ತಿ, ಸ್ಫೂರ್ತಿ ಮತ್ತು ಅದರ ಮೂಲಕ ನಾನು ಸಂಪೂರ್ಣ.
ಆಂಗ್ಲ ಭಾಷೆ ವಿಶ್ವ ಭಾಷೆ ಆದರೇ ಕನ್ನಡ ನನ್ನ ಹೃದಯದ ಭಾಷೆ.
ಕರ್ನಾಟಕಕ್ಕೆ ಕನ್ನಡವೇ ಶೋಭೆ, ಬೆಂಗಳೂರಿಗೆ ಬಸವನಗುಡಿ ಮತ್ತು ಸುತ್ತಮುತ್ತಲಿನ ಪ್ರದೇಶವೇ ಬೆಳಕು.
ಅವರು ಇದ್ದರೇನೇ ಸರ್ ನಮಗೆ ಗೌರವ
ನಿನ್ನೆ ಸಂಜೆ ಕಾರ್ ಸರ್ವಿಸ್ಗೆ ಬಿಟ್ಟು ಬೊಮ್ಮನಹಳ್ಳಿಯ ಬಳಿ ಮೆಟ್ರೋ ಕಾಮಗಾರಿ ಸಾಗುತ್ತಿರುವ ಪಥದ ಹತ್ತಿರ ಆಟೋಗಾಗಿ ಕಾದು ನಿಂತಿದ್ದೆ.
ಬುಕ್ ಮಾಡಿದ ಆಟೋ ಬಂದಾಗ ಆಟೋ ಹತ್ತಿ ಕುಳಿತುಕೊಂಡೆ.
ಆಟೋ ಚಾಲಕ: ಹೆಚ್.ಎಸ್.ಆರ್. ಲೇಔಟ್ ನಲ್ಲಿ ಎಲ್ಲಿ ಸರ್ ?
ನಾನು ಆಟೋ ಚಾಲಕನಿಗೆ ಹೆಚ್.ಎಸ್.ಆರ್. ಲೇಔಟ್ ನಲ್ಲಿ ಗುರುತಿರುವ ಸ್ಥಳದ ಬಗ್ಗೆ ತಿಳಿಸಿ, ನಾನು ಇಳಿಯುವ ಸ್ಥಳ ತಿಳಿಪಡಿಸಿದೆ.
ಆಟೋ ಶುರುವಾಯಿತು …
ನಾನು: ನೀವೂ ಶಂಕರ್ ನಾಗ್ ಅಭಿಮಾನಿನಾ ? (ಆಟೋ ವಿಂಡ್ ಶೀಲ್ಡ್ ಮೇಲೆ ಶಂಕರ್ ನಾಗ್ ಭಾವಚಿತ್ರ ಇದ್ದುದರಿಂದ)
ಆಟೋ ಚಾಲಕ: ನಾನಲ್ಲ ಸರ್ … ನಮ್ಮ ಆಟೋ ಮಾಲೀಕರು ಶಂಕರ್ ನಾಗ್ ಅಭಿಮಾನಿ … ಶಂಕರ್ ನಾಗ್ ಇದ್ದರೇನೇ ಸರ್ ನಮಗೆ ಗೌರವ !
ಒಂದು ಕ್ಷಣಕ್ಕೆ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ.
ಬಹುಶಃ ಒಬ್ಬ ಮನುಷ್ಯನಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ. ಒಬ್ಬ ಮನುಷ್ಯ ಕಾಲವಾಗಿ ಇಪ್ಪತ್ತೊಂಬತ್ತು ವರ್ಷವಾದರೂ ಈ ಬಗೆಯ ಅಭಿಮಾನ ಕಂಡರೆ ಆ ವ್ಯಕ್ತಿಯ ಮೇಲಿನ ಪ್ರೀತಿ ಇನ್ನೂ ಹೆಚ್ಚುತ್ತದೆ.
ಬೆಂಗಳೂರಿನಲ್ಲಿ ಆಟೋಗಳಿರುವವರೆಗೂ ಶಂಕರ್ ನಾಗ್ ಜೀವಂತವಾಗೇ ಇರುತ್ತಾರೆ.
ಅಂದಹಾಗೆ ಶಂಕರ್ ನಾಗ್ ವರ್ಷಗಳ ಹಿಂದೆ ಕನಸು ಕಂಡಿದ್ದ ಬೆಂಗಳೂರು ಮೆಟ್ರೋ ರೈಲಿನ ಕಾಮಗಾರಿ ಇನ್ನು ಹಂತ ಹಂತವಾಗಿ ಸಾಕಾರಗೊಳ್ಳುತ್ತಿದೆ.
ಇ-ಕನ್ನಡಿಗ – Ekannadiga.com ಇಂದಿನಿಂದ ೧೧-೧೧-೨೦೧೯ ನಿಮ್ಮ ಮುಂದೆ
ಇ-ಕನ್ನಡಿಗ – Ekannadiga.com, ಅಂತರ್ಜಾಲದಲ್ಲಿ ಕನ್ನಡ ಮತ್ತು ಕರ್ನಾಟಕದ ಪ್ರಸ್ತುತತೆಯ ನಡಿಗೆಯ ಕಡೆ ನಮ್ಮದೊಂದು ಪುಟ್ಟ ಹೆಜ್ಜೆ.
ಬೆಂಗಳೂರು ಮತ್ತು ಕನ್ನಡ ಒಂದು ರೀತಿ ಕಾಯಿ ಒಬ್ಬಟ್ಟು ಇದ್ದ ಹಾಗೆ, ಆದ್ರೆ ಕಾಯಿ ಒಬ್ಬಟ್ಟಲ್ಲಿ ಸ್ವಲ್ಪ ಕಾಯಿ ಕಡಿಮೆ.
ನಮ್ಮ ಬೆಂಗಳೂರು ಒಂದು ಊರಿನಿಂದ ಬೃಹತ್ ನಗರವಾಗಿ ಬೆಳೆದು ಇಂದು ಸರಿಸುಮಾರು ೧೦೦ ಕಿಲೋಮೀಟರ್ ಸುತ್ತಳತೆಯವರೆಗೂ ವಿಸ್ತರಿಸಿದೆ. ನಗರ ವಿಸ್ತರಿಸಿದ ಹಾಗೆ ಸ್ಥಳೀಯ ವಿಚಾರಗಳು ಕುಂದಿವೆ. ವಿಶ್ವದಲ್ಲಿ ಕ್ಷಿಪ್ರವಾಗಿ ಮತ್ತು ತಾಂತ್ರಿಕವಾಗಿ ಬೆಳೆಯುತ್ತಿರುವ ಯಾವುದೇ ನಗರಕ್ಕೆ ಕಡಿಮೆಯಿಲ್ಲ ನಮ್ಮ ಬೆಂಗಳೂರು, ಆದರೆ ಓಟದೊಂದಿಗೆ ಕ್ಷಿಪ್ರವಾಗಿ ಭಾಷಾ ದೃಷ್ಟಿಕೋನದಿಂದ ತಾಂತ್ರಿಕವಾಗಿ ಬೆಳೆಯಬೇಕಿರುವುದು ನಾವು. ಈ ನಿಟ್ಟಿನಲ್ಲಿ ಅಂತರ್ಜಾಲ ಮತ್ತು ಅದರ ಜೊತೆಗಿನ ಸೇವೆಗಳು ವಿಪುಲ ಅವಕಾಶಗಳನ್ನು ಒದಗಿಸಬಲ್ಲದು.
ವೈವಿಧ್ಯಮಯತೆಯ ತವರಾಗಿರುವ ಬೆಂಗಳೂರಿನಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಬೆಳೆಸಲು ಇದು ಸುಸಮಯ. ಕನ್ನಡ ಮತ್ತು ಕರ್ನಾಟಕವನ್ನು ಪ್ರತಿನಿಧಿಸುವ ನಾಯಕರು ಇಲ್ಲಿ ಬಹು ಮುಖ್ಯ ಮತ್ತು ಅವಶ್ಯಕ ಕೂಡ. ಬ್ಯಾ೦ಕ್, ಐ.ಟಿ, ಸೇವಾ ವಲಯ, ಬಹುತೇಕ ಕಾರ್ಯಕ್ಷೇತ್ರಗಳಲ್ಲಿ ಔದ್ಯೋಗಿಕವಾಗಿ ಸ್ಥಳೀಯರ ಪೂರೈಕೆ ಮತ್ತು ಬೇಡಿಕೆ ಸಮತೋಲನ ಕಾಯ್ದುಕೊಳ್ಳಬೇಕಿದೆ.
ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ನವಯುಗ ತಂತ್ರಜ್ಞಾನವನ್ನು ಬಳಸಿಕೊಂಡು ಬೆಳೆಯುವ ಮನಸ್ಸು ನಮ್ಮದಾಗಬೇಕು.
ಕನ್ನಡ ರಾಜ್ಯೋತ್ಸವದ ನವೆಂಬರ್ ಮಾಸದಲ್ಲಿ, ನಿಮ್ಮ ಈ ಕನ್ನಡಿಗನಿಂದ ಆ ದಿಕ್ಕಿನಲ್ಲಿ ಈ ಚಿಕ್ಕ ಪ್ರಯತ್ನ.